ಬಡವರ ಜನಾರ್ಧನ ಪೂಜಾರಿ

ಸಾಮಾಜಿಕ ಕ್ರಾಂತಿಗಳ ಹರಿಕಾರ, ಮಂಗಳೂರಿನ ಸಾಂಸ್ಕತಿಕ ರಾಯಭಾರಿ “ಬಡವರ ಬಂಧು” ಬಿ. ಜನಾರ್ಧನ ಪೂಜಾರಿ

ಹೌದು, ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆದು ರಜತ ಸಂಭ್ರಮದ ಅಂಚಿನಲ್ಲಿರುವ ಸಮಯವದು. ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಿ ಪಡೆದು ಸಂತೃಪ್ತ ಜೀವನದ ಕನಸು ಕಂಡ ರೈತಾಪಿ ಜನಾಂಗ ಶ್ರೀಮಂತರ ದಬ್ಬಾಳಿಕೆಯಡಿಯಲ್ಲಿ ಜೀವನ ನಡೆಸಬೇಕಾಗಿತ್ತು ! ಗೇಣಿದಾರರು ಭೂಮಾಲಿಕರ ಹಿಡಿತದಲ್ಲಿ ನರಳುತ್ತಾ ಬದುಕು ಸವೆಸುತ್ತಿದ್ದರು. ನಮ್ಮ ದೇಶದ ಗ್ರಾಮೀಣ ಪ್ರದೇಶಗಳು ಸಾಮಾಜಿಕ ಪಿಡುಗುಗಳಿಂದ ತತ್ತರಿಸುತಿತ್ತು. ಉಚ್ಛಜಾತಿ, ನೀಚಜಾತಿ, ಸ್ಪರ್ಶಕ್ಕೆ ಅಯೋಗ್ಯರು, ಸಹ ಪಂಕ್ತಿಗೆ ಸೇರದವರು, ಅಸ್ವತಂತ್ರರು, ವಿದ್ಯಾಹೀನರು ಒಂದು ಹೊತ್ತಿನ ಹಿಡಿಯಕ್ಕಿಗೂ ಸಿರಿವಂತರ ಜೀತದಾಳುಗಳಾಗಿ ದುಡಿಯಲೇ ಬೇಕಾದವರು. ಧನಿಗಳ ಅಣತಿಯಂತೆ ಒಪ್ಪೊತ್ತಿನ ಊಟಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಾ ಬದುಕು ಸಾಗಿಸಲು ಪರದಾಡುತ್ತಿದ್ದ ನಿರ್ಗತಿಕರು. ಹೀಗೆ ಜಾತಿ-ನೀತಿ, ಉಳ್ಳವರು-ಬಲ್ಲವರು ಎಂಬ ದುಷ್ಟ ಶಕ್ತಿಗಳ ಕಪಿಮುಷ್ಟಿಯೊಳಗೆ ಚಿತ್ರಹಿಂಸೆ ಪಡುತ್ತಾ ಈ ಜಗತ್ತಿನಲ್ಲಿ ಬದುಕುವುದೇ ಘೋರ ಅಪರಾಧವೆಂದು ಸಾವು ಬದುಕಿನ ಹೋರಾಟದ ಮದ್ಯೆ ಧನಿಗಳವರ ದೌರ್ಜನ್ಯ ಅಟ್ಟಹಾಸಗಳಿಗೆ ಬೆದರಿ ದಾಸ್ಯದ ಬದುಕಿನಿಂದ ಬಿಡುಗಡೆಯನ್ನು ಬಯಸುತ್ತಾ ಕತ್ತಲಿನಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದ ಗ್ರಾಮೀಣ ಪ್ರದೇಶದ ಬಡವರ ಬದುಕು ಶೋಚನೀಯವಾಗಿತ್ತು. ಉಳ್ಳವರ ದಬ್ಬಾಳಿಕೆಯಲ್ಲಿ ನ್ಯಾಯವೆಂಬುವುದೇ ಬಡ ವರ್ಗದವರಿಗೆ ಮರೀಚಿಕೆಯಾಗಿತ್ತು. ಆ ಸಂದರ್ಭಕ್ಕೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಾಮಾಣಿಕತೆಯಿಂದ ಬಡ ನಿರ್ಗತಿಕರ ಪರವಾಗಿ ನಿಂತು ಉಚಿತ ನ್ಯಾಯದಾನ, ಹೋರಾಟ ಮತ್ತು ಸಮಾಜ ಸೇವೆಯ ಮೂಲಕ ಬಡವರ ಆಶಾಕಿರಣವಾಗಿ ವಕೀಲ ವೃತ್ತಿಯಲ್ಲಿ ಕೇಳಿಬರುತ್ತಿದ್ದ ಎತ್ತರದ ಹೆಸರು ಬಿ. ಜನಾರ್ಧನ ಪೂಜಾರಿ.

ಮಂಗಳೂರು ಬೊಕ್ಕಪಟ್ನದ ಸ್ವಾಭಿಮಾನಿ ಬಡಕುಟುಂಬದಲ್ಲಿ 1937 ಎಪ್ರಿಲ್ 27ರಂದು ಜನಾರ್ಧನ ಪೂಜಾರಿಗಳ ಜನನ. ತಂದೆ ದಿವಂಗತ ಜಾರಪ್ಪ ಪೂಜಾರಿ. ತಾಯಿ ದಿವಂಗತ ಚೆನ್ನಮ್ಮ. ಹಸಿವು ಬಡತನ ಅಸ್ಪ್ರಶ್ಯತೆ ಶೋಷಣೆಯನ್ನು ಸ್ವತಃ ತಾನು ಅನುಭವಿಸುತ್ತಾ, ತನ್ನ ಕಠಿಣ ಪರಿಶ್ರಮದಿಂದ ಬೆಳೆದು ಬಂದ ಪೂಜಾರಿಯವರು ಶಾಲಾ ಕಾಲೇಜಿನಲ್ಲಿ ಮೆರಿಟ್ ಸ್ಕಾಲರ್ ಶಿಪ್ ಪಡೆದು ಕಾನೂನು ಪದವಿ ಪಡೆದರು. ತನ್ನ ಅಧ್ಯಯನದ ಮಧ್ಯೆಯೇ ತನ್ನ ಜೀವನವನ್ನು ಶೋಷಿತ ವರ್ಗದ ಪರಿವರ್ತನೆಗಾಗಿ  ಸವೆಸಿ ಸಮಾಜದಲ್ಲಿ ಸಮಾನತೆಯ ವ್ಯವಸ್ಥೆಯನ್ನು ರೂಪಿಸಿ ಜಗತ್ತಿನ ಸಮನ್ವಯತೆಯ ಹರಿಕಾರರಾದ ಮಹಾಕ್ರಾಂತಿ ಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳಿಂದ ಪ್ರಭಾವಿತರಾಗಿ ಅದನ್ನು ಮೈಗೂಡಿಸಿಕೊಂಡರು.
ಮಾನವೀಯತೆಯ ನೆಲೆಯನ್ನು ಕಡಿದುಕೊಂಡು ನರಳಾಡುತ್ತಿದ್ದ ಸಮಾಜವನ್ನು ಆಧ್ಯಾತ್ಮಿಕ ಶಕ್ತಿ, ಧೀ ಶಕ್ತಿ, ಸಾಹಿತ್ಯಗಳ ಮೂಲಕ ಪರಿವರ್ತನೆಗೈದು ಜಾತೀಯತೆಯ ಕಗ್ಗತ್ತಲಿನಲ್ಲಿದ್ದ ಸಮಾಜಕ್ಕೆ ನಿಜವಾದ ಮಾನವೀಯ ಆದರ್ಶಗಳ ಬೆಳಕು ತೋರಿಸಿ ಶೋಷಿತ, ದಲಿತರ ಉದ್ಧಾರ ಮಾಡಿದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳಂತೆ ತಮ್ಮ ಪೂರ್ಣ ಜೀವಿತವನ್ನು ದೀನ ದಲಿತರ, ಶೋಷಿತರ ಆಕ್ರಂಧನ ರೋಧನಗಳಿಗೆ ಸಾಂತ್ವನ ನೀಡಲು ಬಯಸಿದರು. ಭಗವಂತನ ಸೃಷ್ಠಿಯಲ್ಲಿ ಸಮಾನತೆ ಪಡೆದುಕೊಂಡು ಬಂದಿರುವ ಮಾನವ ಕುಲಕ್ಕೆ ಸಮಾಜದಲ್ಲಿ ಸಮಾನರಾಗಿ ಜೀವಿಸಲು ಹಕ್ಕಿದೆ ಎಂದು ನ್ಯಾಯಾಲಯದಲ್ಲೂ ಪ್ರತಿವಾದಿಸಿದರು. ಸತ್ಯವನ್ನು ಸತ್ಯವೆಂದೇ ಒಪ್ಪಿಕೊಳ್ಳಬೇಕು. ಬೇರೆಯವರ ಹಿತಕ್ಕಾಗಿ, ನಮ್ಮ ಒಳಿತಿಗಾಗಿ ಸತ್ಯವನ್ನು ಮರೆಮಾಚಬಾರದು ಎಂಬ ಗುರುಗಳ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರು. ಬಡವರ, ದಲಿತರ ನಿರ್ಗತಿಕರ ನೋವು ಸಂಕಷ್ಟಗಳಿಗೆ ಸಹಾಯಹಸ್ತ ಚಾಚಿದರು. ಬಡವರ ಪರವಾಗಿ ಧರ್ಮಾರ್ಥವಾಗಿ ನ್ಯಾಯಾಲಯದಲ್ಲಿ ವಾದಿಸಿ ನ್ಯಾಯ ಒದಗಿಸಿಕೊಡುವುದರ ಮೂಲಕ ಗುರು ತತ್ವಗಳ ಅನುಷ್ಠಾನವನ್ನು ಆರಂಭಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸುಮಾರು 19 ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿ ಓರ್ವ ಪ್ರಸಿದ್ಧ ಹೆಸರಾಂತ ಕ್ರಿಮಿನಲ್ ವಕೀಲರಾಗಿ ಹೆಸರು ಪಡೆಯುವುದರೊಂದಿಗೆ “ದೀನದಲಿತರ ಬಂಧು” ಎಂದೇ ಪ್ರಸಿದ್ಧಿಯಾದರು. 1968ರಲ್ಲಿ ವಿವಾಹವಾಗಿ, ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಗೇಣಿದಾರ ರೈತರ ಆಪದ್ಬಾಂಧವ
ಭೂಹಿಡುವಳಿದಾರರಿಂದ ಗೇಣಿದಾರ ರೈತರು ಪಡುತ್ತಿರುವ ಸಂಕಷ್ಟವನ್ನು ಮನಗಂಡ ಭಾರತದ ಅಂದಿನ ಪ್ರಧಾನಿಯಾಗಿದ್ದ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ ಆಶಯದಂತೆ ಕರ್ನಾಟಕದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು 1972ರಲ್ಲಿ “ಉಳುವವನೇ ಹೊಲದೊಡೆಯ” ಎಂಬ ಭೂಮಸೂದೆಯನ್ನು ಜಾರಿ ಮಾಡಿ ಅನುಷ್ಠಾನ ಗೊಳಿಸುವ ಮೂಲಕ ಗೇಣಿದಾರನನ್ನೇ ಭೂಮಾಲಕನನ್ನಾಗಿಸಿ ಸಿರಿವಂತರ ದರ್ಪ ದೌರ್ಜನ್ಯಗಳಿಗೆ ಕಡಿವಾಣ ಹಾಕಿದರು. ಆ ಸಂದರ್ಭಕ್ಕೆ ಭೂಮಾಲಿಕರು ಒಗ್ಗಟ್ಟಾಗಿ ಸೇರಿಕೊಂಡು ಬಹುಸಂಖ್ಯೆಯಲ್ಲಿದ್ದ ಗೇಣಿದಾರ ರೈತರ ಮನೆ, ಕೊಟ್ಟಿಗೆ ಹಟ್ಟಿಗಳನ್ನು ರಾತ್ರೋ ರಾತ್ರಿಯೇ ಮುರಿದು ,ಬೆಂಕಿಯಿಟ್ಟು ನಾಶ ಪಡಿಸಿದ್ದಲ್ಲದೆ, ಅವರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಿ ಊರಿನಿಂದಲೇ ಓಡಿಸಿ ಬೀದಿಪಾಲು ಮಾಡುತ್ತಿದ್ದರು. ಆ ಸಂದರ್ಭಕ್ಕೆ ಉಳ್ಳವರ ದಬ್ಬಾಳಿಕೆಯ ವಿರುದ್ಧ ತೊಡೆ ತಟ್ಟಿ ಬಡವರ ನ್ಯಾಯದ ಪರವಾಗಿ ದೈರ್ಯವಾಗಿ ನಿಂತು ಮನೆ ಜಮೀನು ಕಳೆದು ಕೊಂಡ ರೈತಾಪಿ ಬಡ ಜನರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ, ಕಾನೂನು ಮೂಲಕ ಹೋರಾಡಿ, ಭೂಮಸೂದೆಯ ಕಾಯ್ದೆಯಂತೆ ಉಳುವವನಿಗೇ ಭೂಮಿ ಸಿಗುವಂತೆ ಮಾಡಿ ಅದೆಷ್ಟೋ ರೈತರ ಕಣ್ಣೀರು ಒರೆಸಿ ಅಪದ್ಬಾಂಧವನಾಗಿ ನಿರ್ಗತಿಕರ ಸೇವೆ ಮಾಡುವ ಮೂಲಕ ದೀನ ದಲಿತರ ನೇತಾರನಾಗಿ ಜನಾರ್ಧನ ಪೂಜಾರಿಗಳವರು ಗುರುತಿಸಿಕೊಂಡರು.

ಕೈಬೀಸಿ ಕರೆದ ರಾಜಕೀಯ ಕ್ಷೇತ್ರ
ಬಡವರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಬಡರೈತರ ಪರವಾಗಿ ಹಣ ಪಡೆದುಕೊಳ್ಳದೆ ಉಚಿತವಾಗಿ ರೈತಾಪಿ ವರ್ಗದವರ ಸಮಸ್ಯೆಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ ನ್ಯಾಯ ಒದಗಿಸಿಕೊಟ್ಟು ಬದುಕು ನೀಡುತ್ತಿದ್ದ ಜನಪರ ಅಪತ್ಬಾಂಧವ ಎಂದೇ ಮನೆಮಾತಾಗಿದ್ದ ಪೂಜಾರಿಯವರ ವ್ಯಕ್ತಿತ್ವ ಊರಿಗೆ ಊರೇ ಹರಿದಾಡಿತು.
ಪೂಜಾರಿಯವರು ಭೂಮಸೂದೆ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಬಡ ರೈತರ ಪರವಾಗಿ ತಳೆದ ನಿಲುವು, ನ್ಯಾಯದ ಮೇಲಿನ ಹೋರಾಟ, ದಬ್ಬಾಳಿಕೆಯ ವಿರುದ್ಧ ತೋರುತ್ತಿದ್ದ ದೈರ್ಯ, ಜನಾಕರ್ಷಣೆಯ ಸಂಘಟನಾ ಚತುರತೆಯಿಂದಾಗಿ ಇವರಲ್ಲಿದ್ದ ಅಸಾಧಾರಣವಾದ ಅಸದೃಶ್ಯವಾದ ಮೇರು ವ್ಯಕ್ತಿತ್ವ ಅಂದಿನ ಕರ್ನಾಟಕದ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುಗಳ ಕಣ್ಣಿಗೆ ಬಿತ್ತು. ಪೂಜಾರಿಯವರ ಜನಪರ ಸೇವೆಯನ್ನು ಬಡಜನತೆಯ ಮೇಲಿನ ಕಾಳಜಿ, ಮೇರು ವ್ಯಕ್ತಿತ್ವವನ್ನು ಮುಖ್ಯ ಮಂತ್ರಿಗಳು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಪರಿಚಯಿಸಿದರಲ್ಲದೆ, ಅವರ ಮನವೊಲಿಸಿ ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ವಿದ್ಯಾವಂತನಾಗಿಯೂ ಬುದ್ದಿವಂತನಾಗಿಯೂ ನಮ್ಮ ಪಕ್ಷದ ದ್ಯೇಯದಂತೆ ಬಡವರ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುವ ಪೂಜಾರಿಗಿಂತ ಇನ್ನೊಬ್ಬ ವ್ಯಕ್ತಿಯಿಲ್ಲ ಎಂಬುವುದಾಗಿ ನೇರವಾಗಿ ತಿಳಿಹೇಳಿ ಪೂಜಾರಿಯವರಿಗೆ ಟಿಕೇಟ್ ತೆಗೆಸಿಕೊಟ್ಟರು. ಇಡೀ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಜನಪ್ರಿಯವಾಗಿದ್ದ ಪೂಜಾರಿಯವರು ಬಹುಮತದಿಂದ ಮಂಗಳೂರು ಲೋಕಸಭಾ ಸಂಸದರಾಗಿ ರಾಜಕೀಯ ಸೇವೆ ಆರಂಭಿಸಿದರು.

ಮಂಗಳೂರು ಕ್ಷೇತ್ರದಿಂದ ಸತತ 4 ಬಾರಿ ಆಯ್ಕೆ; ಎರಡು ಬಾರಿ ರಾಜ್ಯ ಸಭೆಗೆ
ಪೂಜಾರಿಯವರನ್ನು ಜನತೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ 1977. 1980, 1984, ಮತ್ತು 1989ರಲ್ಲಿ, ಹೀಗೆ ಒಟ್ಟು 4 ಬಾರಿ ಆರಿಸಿ ಕಳುಹಿಸಿದ್ದಾರೆ. 1977ರಲ್ಲಿ ಬಿಎಲ್‍ಡಿ ಪಕ್ಷದ ಎ.ಕೆ ಸುಬ್ಬಯ್ಯ ಅವರನ್ನು 78328 ಮತಗಳ ಅಂತರದಿಂದ ಪರಾಭವ ಗೊಳಿಸಿ 6ನೇ ಲೋಕ ಸಭೆಯನ್ನು ಪ್ರವೇಶಿಸಿದ್ದಾರೆ. 1980ರಲ್ಲಿ ಜೆಎನ್‍ಪಿಯ ಕರಂಬಳ್ಳಿ ಸಂಜೀವ ಶೆಟ್ಟಿ ಅವರಿಂದ 1,28897 ಹೆಚ್ಚು ಮತಗಳನ್ನು ಪಡೆದು 7ನೇ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದಾರೆ. 1984ರಲ್ಲಿ ಬಿಜೆಪಿಯ ಕೆ. ರಾಮಭಟ್ಟರನ್ನು 1,19399 ಮತಗಳಿಂದ ಸೋಲಿಸಿ ಮಂಗಳೂರಿನ ಸಂಸದರಾಗಿ 8ನೇ ಲೋಕ ಸಭೆಯನ್ನಲಂಕರಿಸಿದ್ದಾರೆ. 1989 ರಲ್ಲಿ ಬಿಜೆಪಿಯ ಧನಂಜಯ ಕುಮಾರ್ ಅವರಿಂದ 91,097 ಮತಗಳನ್ನು ಹೆಚ್ಚು ಪಡೆದು ಸತತವಾಗಿ 4 ಬಾರಿಗೆ 9ನೇ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಇದಕ್ಕೂ ಮೊದಲು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವ ವ್ಯಕ್ತಿಯೂ ಸತತ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿಲ್ಲ. ಆದ ಕಾರಣ ಸತತ ನಾಲ್ಕನೇ ಬಾರಿಗೆ ಗೆದ್ದಾಗ ಹೊಸ ದಾಖಲೆ ಸೃಷ್ಟಿಯಾಗಿದೆ.
1994 ರಿಂದ 2000ದವರೆಗೆ ಮತ್ತು 2002ರಿಂದ 2008ರವರೆಗೆ ಎರಡು ಬಾರಿP ಕರ್ನಾಟಕ ರಾಜ್ಯದಿಂದ ಪೂರ್ಣಾವಧಿ ರಾಜ್ಯಸಭಾ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಹಣಕಾಸು ಸಚಿವರಾಗಿ ; ಬಡವರ ಬಾಗಿಲಿಗೆ ಬ್ಯಾಂಕ್
ರಾಜಕೀಯ ಕ್ಷೇತ್ರದಲ್ಲಿ ಓರ್ವ ಜನಪ್ರತಿನಿಧಿಯಾಗಿ ಜನಪರವಾದ ಕರ್ತವ್ಯಗಳನ್ನು ಮಾಡಲೇ ಬೇಕು. ಅದನ್ನು ಕೇಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ ಎಂದು ಪ್ರತಿಪಾದಿಸುತ್ತಾ ಬಂದ ಪೂಜಾರಿಯವರ ಧಣಿವರಿಯದ ದುಡಿಮೆ, ಶಿಸ್ತುಬದ್ಧವಾದ ಜೀವನ ಭ್ರಷ್ಟಾಚಾರರಹಿತವಾದ ವ್ಯವಹಾರ, ಯಾವುದೇ ಆಮಿಷಗಳಿಗೂ ಒಂದಿಷ್ಟೂ ಬಗ್ಗದ ನಿಸ್ವಾರ್ಥವಾದ ಬದುಕು , ಬಡವರ ಪರವಾಗಿ ಧ್ವನಿಯೆತ್ತುವ ದೈರ್ಯವನ್ನು ಮನಗಂಡ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು 1982ರಲ್ಲಿ ಭಾರತ ಸರಕಾರದ ಹಣಕಾಸು ಇಲಾಖೆಯ ಉಪ ಸಚಿವರನ್ನಾಗಿ ನೇಮಕ ಮಾಡಿದರು. 1984ರಿಂದ ಹಣಕಾಸು ಇಲಾಖೆಯ ರಾಜ್ಯ ಸಚಿವರಾದರು. 1982ರಿಂದ 1987ರವರೆಗೆ ಹಣಕಾಸು ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲಿ ಅವರು ನಡೆಸಿದ ಸಾಲಮೇಳಗಳು ಬಹಳಷ್ಟು ಪ್ರಸಿದ್ಧಿಯನ್ನು ಪಡೆದು ಪೂಜಾರಿಯವರಿಗೆ ಹೆಚ್ಚಿನ ಸ್ಥಾನಮಾನವನ್ನು ನೀಡಿತು.. ಸಾಲಮೇಳಗಳು ಹೇಗಿತ್ತು ಎಂದರೆ ಬ್ಯಾಂಕಿನ ಮೆಟ್ಟಿಲು ಹತ್ತದ ಬಡ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ಸ್ವ ಉದ್ಯೋಗ ಮಾಡುವುದಕ್ಕಾಗಿ ಲೋನ್ ಮೇಳವನ್ನು ಆಯೋಜಿಸಿ ಅಲ್ಲಿಗೆ ಬ್ಯಾಂಕ್ ಅಧಿಕಾರಿಗಳು ಬಂದು ಅರ್ಜಿ ಪಡೆದು ಜಾಮೀನುರಹಿತವಾಗಿ ಸ್ಥಳದಲ್ಲಿಯೇ ಸಾಲ ವಿತರಣೆ ಮಾಡಬೇಕಾಗಿತ್ತು. ಈ ಬಗ್ಗೆ ಅಧಿಕಾರಿ ವರ್ಗದಿಂದ ಮತ್ತು ಶ್ರೀಮಂತ ವರ್ಗದಿಂದ ಅಪಸ್ವರಗಳು ವಿರೋಧಗಳು ಬಂದವಾದರೂ ಪೂಜಾರಿಯವರು ಅದನ್ನೆಲ್ಲ ಕ್ಯಾರೇ ಮಾಡದೆ ಸಾಲಮೇಳವನ್ನು ಇನ್ನಷ್ಟು ಹೆಚ್ಚಿಸಿ ಬಡಜನರ ಆಶಾಕಿರಣವಾದರು. 1988ರಿಂದ 89ರವರೆಗೆ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದರು. 1990ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ ಗಾಂಧಿಯವರು ಅಖಿಲ ಬಾರತೀಯ ಕಾಂಗ್ರೇಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮತ್ತು ಸಚಿವರಾಗಿದ್ದಾಗಲೇ 1987ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿಯ ಅಧ್ಯಕ್ಷರನ್ನಾಗಿಯೂ ನೇಮಿಸಿದರು. 1996ರವರೆಗೆ ಪಕ್ಷದ ಹುದ್ದೆಯನ್ನು ನಿಭಾಯಿಸಿದ ಪೂಜಾರಿಯವರು ಸೋನಿಯಾ ಗಾಂಧಿಯವರಿಂದ ಮತ್ತೆ 2003ರಿಂದ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿಯ ಅಧ್ಯಕ್ಷರಾಗಿ ನೇಮಕವಾಗಿ 2005ರವರೆಗೆ ಕರ್ತವ್ಯ ನಿರ್ವಹಿಸಿದರು.

ಪ್ರಾಮಾಣಿಕತೆಗೆ ಮನ್ನಣೆ ನೀಡಿದ ಗಾಂಧೀ ಕುಟುಂಬ
ಲೋಕ ಸಭೆಗೆ 4 ಬಾರಿ ಆಯ್ಕೆಯಾಗಿ, ರಾಜ್ಯ ಸಭೆಗೆ ಎರಡು ಬಾರಿ ಪ್ರವೇಶ ಪಡೆದು ಸುಮಾರು 25 ವರ್ಷಗಳ ಸುಧೀರ್ಘ ಅವಧಿಯಲ್ಲಿ ವಿವಿಧ ಖಾತೆಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ ಪೂಜಾರಿಗಳು ಅಪಾರ ಮೇದಾವಿಗಳು, ಅನುಭವಿಗಳೂ ಆಗಿದ್ದಾರೆ. ದೇಶವನ್ನು ಪ್ರತಿನಿಧಿಸಿ ಯು.ಎಸ್.ಎಸ್.ಆರ್, ಮಾಲ್ಡೀವ್ಸ್, ಥಾಯ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ, ಯುಎಸ್‍ಎ, ಯು.ಕೆ. ರಾಷ್ಟ್ರಗಳಿಗೆ ಭೇಟಿ ನೀಡಿರುವ ಪೂಜಾರಿಯವರು 2005ರಲ್ಲಿ ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿಯ 60ನೇ ಅಧಿವೇಶನದಲ್ಲಿ ಭಾಗಿಯಾದ ಅಧಿಕಾರೇತರ ನಿಯೋಗದ ಸದಸ್ಯರಾಗಿದ್ದರು. ಎಲ್ಲ ಸದಸ್ಯ ರಾಷ್ಟ್ರಗಳು ಪ್ರತಿನಿಧಿಸುವ ಯುನೈಟೆಡ್ ನೇಶನ್ಸ್ ಜನರಲ್ ಅಸೆಂಬ್ಲಿ ಮತ್ತು ಅದರ ಮೂರು ಉಪ- ಸಮಿತಿಗಳ ಅಧಿವೇಶನದಲ್ಲಿ ಪೂಜಾರಿಯವರು ರಾಷ್ಟ್ರವನ್ನು ಪ್ರತಿನಿಧಿಸಿ ಭಾಷಣ ಮಾಡಿದ್ದಾರೆ.
ಹಣಕಾಸು ಸಚಿವರಾಗಿ ಆರ್ಥಿಕ ಸ್ವಾವಲಂಬನೆಗಾಗಿ ನಿರ್ಗತಿಕರಿಗೆ ಅವರು ಮಾಡಿದ ಬ್ಯಾಂಕ್ ಸಾಲಮೇಳಗಳು ಭಾರತದ ಇತಿಹಾಸದಲ್ಲಿಯೇ ಒಂದು ಚರಿತ್ರಾರ್ಹ ವಿಷಯವಾಗಿ ಸೇರಿಕೊಂಡಿದೆÉ. ಭೂ ಮಸೂದೆಯಿಂದ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡ ಬಡ ರೈತಾಪಿ ವರ್ಗ ಸಾಲ ಮೇಳಗಳಿಂದ ಆರ್ಥಿಕ ಸ್ಥಿರತೆಯನ್ನು ಪಡೆದುಕೊಂಡು ಕಾಂಗ್ರೇಸ್ ಪಕ್ಷದ ಉಳಿವಿನ ಭದ್ರ ಬುನಾದಿಯಾಗಿರುವುದು ಮುಂದೆ ಪೂಜಾರಿಯವರ ಸತತ ಗೆಲುವಿನಲ್ಲಿ ಕಾಣಬಹುದಾಗಿದೆ. ಬಡಜನತೆಯ ಪಕ್ಷ ಕಾಂಗ್ರೇಸ್ ಎಂಬುವುದನ್ನು ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು ಭೂಮಸೂದೆ ಜಾರಿ ಮಾಡುವ ಮೂಲಕ ಸಾಬೀತು ಮಾಡಿದ ಬೆನ್ನಲ್ಲೇ ಬಡ ಜನರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆರ್ಥಿಕ ಪುನಃಶ್ಚೇತನಕ್ಕಾಗಿ ಪೂಜಾರಿಯವರು ಬ್ಯಾಂಕ್‍ಗಳಿಂದ ಸಾಲ ನೀಡಿಕೆ ಯೋಜನೆ ಕಾಂಗ್ರೇಸ್ ಪಕ್ಷದ ದ್ಯೇಯ ಧೋರಣೆಗಳನ್ನು ಎತ್ತಿ ಹಿಡಿಯಿತು. ಜನಪರವಾದ ಯೋಜನೆಗಳನ್ನು ರೂಪಿಸಿಕೊಂಡು ಪಕ್ಷವನ್ನು ಮುನ್ನಡೆಸಿರುವುದನ್ನು ಶ್ರೀಮತಿ ಇಂದಿರಾ ಗಾಂಧಿಯವರು ನಂತರ ಶ್ರೀ ರಾಜೀವ ಗಾಂಧಿಯವರು ನಂತರ ಶ್ರೀಮತಿ ಸೋನಿಯ ಗಾಂಧಿಯವರು ಮನಗಂಡು ಪೂಜಾರಿಯವರಿಗೆ ಪಕ್ಷದಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಪ್ರಾಮಾಣಿಕತೆ, ನಿಷ್ಠೆ, ಶುದ್ಧಹಸ್ತ, ಕಠಿಣದುಡಿಮೆಯ ಪೂಜಾರಿಯಂತವರು ಹತ್ತು ಜನ ನಮ್ಮ ಪಕ್ಷದಲ್ಲಿದ್ದರೆ ನಮ್ಮ ಪಕ್ಷಕ್ಕೆ ಸಾವಿಲ್ಲ ಎಂದು ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು ಪೂಜಾರಿಯವರ ಬಗ್ಗೆ ಪ್ರಾಮಾಣಿಕ ಮಾತನ್ನು ಹೇಳಿದ್ದರು. ಪೂಜಾರಿಯೆಂದರೆ ಬಡವರ ಪೂಜಾರಿ, ಯಾವುದೇ ಆಮಿಷಗಳಿಂದ ಖರೀದಿಸಲಾಗದ ಓರ್ವ ರಾಜಕಾರಣಿ ದೇಶದಲ್ಲಿದ್ದರೆ ಅದು ಪೂಜಾರಿ ಮಾತ್ರ ಎಂಬುವುದಾಗಿ ಪೂಜಾರಿಯವರ ರಾಜಕೀಯ ನಿಷ್ಠೆಯನ್ನು ರಾಜೀವ ಗಾಂಧಿಯವರು ಅದೆಷ್ಟೋ ಬಾರಿ ಪುನರುಚ್ಚರಿಸಿದ್ದರು. ಇದು ಪೂಜಾರಿಯವರ ರಾಜಕೀಯ ಚಾಣಕ್ಷತೆಗೆ ಸವಾಲಾಗಿ ಈಗಲೂ ಅವರ ವಿರುದ್ಧವಾಗಿ ‘ಕೈ’ಯಾಡಿಸದಂತೆ ಮಾಡಿದೆ. ಪೂಜಾರಿಯವರಿಗೆ ಪೂಜಾರಿಯವರೇ ಸಾಟಿಯೆಂಬುವುದನ್ನು ಪರೀಕ್ಷಿಸಲು ಕೂಡಾ ರಾಜಕಾರಣಿಗಳಿಗೆ ಆತ್ಮವಿಶ್ವಾಸವಿಲ್ಲದಾಗಿದೆ. ಪೂಜಾರಿಯವರಿಗೆ ಕುಲದ ಬಲವಾಗಲಿ, ಹಣದ ಬಲವಾಗಲಿ, ಹಿರಿಯರ ಬಲವಾಗಲಿ ಪ್ರಭಾವದ ಬಲವಾಗಲಿ ಇರಲಿಲ್ಲ. ಆದರೆ ಅವರು ತಮ್ಮ ಆತ್ಮ ವಿಶ್ವಾಸ, ಛಲ ಪರಿಶ್ರಮ ಪ್ರತಿಭೆ ಮತ್ತು ಬುದ್ದಿವಂತಿಕೆಯಿಂದ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನಲಂಕರಿಸಿ ಪ್ರಾಮಾಣಿಕತೆ ಮತ್ತು ನಿಷ್ಠೆಯ ಮೂಲಕ ಯಶಸ್ಸಿನ ಉತ್ತುಂಗವನ್ನೇರಿ ಹೆಸರು ಪಡೆಯುತ್ತಿದ್ದಾರೆ. ದೀನದಲಿತರ ಸೇವಾ ಬಲ ಅವರಿಗೆ ರಕ್ಷೆಯಾಗಿ ನಿಂತಿದೆ.

“ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ”
ಮೌಢ್ಯ ಅಂದಾನುಕರಣೆ, ಕಂದಾಚಾರಗಳಲ್ಲಿ ಶತಶತಮಾನಗಳಲ್ಲಿ ಬಳಲುತ್ತಿದ್ದ ಮಾನವ ಜೀವಿಗಳನ್ನು ವಿದ್ಯೆ ಹಾಗೂ ಸಂಘಟನಾ ಶಕ್ತಿಗಳಿಂದ ಮಾತ್ರ ಸುಸಂಸ್ಕøತರನ್ನಾಗಿಸಲು ಸಾಧ್ಯ ಎಂದು ಚಿಂತಿಸಿದ ನಾರಾಯಣ ಗುರುಗಳ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಸಾರ್ವಕಾಲಿಕ ಅಮರ ಸಂದೇಶದ ಅನುಷ್ಠಾನಕ್ಕೆ ಪೂಜಾರಿಯವರು ಪಣತೊಟ್ಟರು. ಸಹಸ್ರಾರು ಡೊನೆಷನ್ ನೀಡಿ ಶ್ರೀಮಂತರು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭಕ್ಕೆ ಪೂಜಾರಿಯವರ ಮನೆ ಬಾಗಿಲಿನ ಮುಂದೆ ಅದೆಷ್ಟೋ ತೀರಾ ಹಿಂದುಳಿದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಒಂದು ಸೀಟು ತೆಗೆದುಕೊಡುವಂತೆ ಅಂಗಲಾಚಿ ಕಣ್ಣಿರು ಸುರಿಸುತ್ತಿದ್ದರು. ಜಿಲ್ಲೆಯ ಬೆರಳೆಣಿಕೆಯ ಶ್ರೀಮಂತ ಶೈಕ್ಷಣಿಕ ಕೇಂದ್ರಗಳಲ್ಲಿ ಎಲ್ಲರಿಗೂ ಸೀಟು ತೆಗೆಸಿಕೊಡುವುದು ಕಷ್ಟಸಾಧ್ಯವಾದಾಗ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕೆಂದು ಬಡವರಿಗಾಗಿಯೇ ಒಂದು ವಿದ್ಯಾಲಯವೊಂದನ್ನು ತೆರೆಯುವ ಯೋಚನೆಗೆ ಯೋಜನೆ ರೂಪಿಸಿದರು.ತೀರಾ ಹಿಂದುಳಿದವರು ಕೂಡಾ ವಿದ್ಯಾರ್ಜನೆಯಿಂದ ವಿಮುಖರಾಗಬಾರದು ಎಂದರಿತು ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕೆಂದು ಹಿಂದುಳಿದ ವರ್ಗದವರಿಗಾಗಿಯೇ ಆರಂಭಿಸಿದ ಶ್ರೀ ಗೋಕರ್ಣನಾಥ ಕಾಲೇಜಿನ ಸ್ಥಾಪನೆ ಮತ್ತು ಅಭಿವೃದ್ಧಿಯ ಶಿಲ್ಪಿಯಾಗಿ ಪೂಜಾರಿ ಕಾಣುತ್ತಾರೆ. ತನ್ನ ಅಧಿಕಾರವಧಿಯಲ್ಲಿ ಹಲವಾರು ಶಾಲೆಗಳ ಮಂಜೂರಾತಿ, ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಲವಾರು ಶಾಲಾ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಅಪೇಕ್ಷಿಸಿದ ಬಡ ವಿದ್ಯಾರ್ಥಿಗಳಿಗೆ ಡೊನೇಷನ್ ಮುಕ್ತವಾಗಿ ಕಲಿಕೆಗೆ ನೆರವಾಗಿದ್ದಾರೆ. ಶಾಲಾ ಹಿಂದುಳಿದ ವರ್ಗಗಳಿಗಾಗಿ ಬಡವರಿಗಾಗಿ ಇರುವ ವಸತಿ ನಿಲಯಗಳ ಗುಣ ಮಟ್ಟವನ್ನು ಏರಿಸಿ ವಿದ್ಯಾರ್ಥಿಗಳಿಗೆ ಭವಿಷ್ಯತ್ತನ್ನು ನೀಡಿದ್ದಾರೆ. ಸಂಘ ಸಂಸ್ಥೆಗಳಿಂದ ವಿದ್ಯಾನಿಧಿಯ ಕ್ರೋಢಿಕರಣ ಮಾಡಿ ಆ ಮೂಲಕ ವಿದ್ಯಾರ್ಜನೆ ಬಯಸಿದ ಹಲವಾರು ನಿರ್ಗತಿಕರಿಗೆ ಸಹಾಯ ನೀಡಿದ್ದಾರೆ. ಸಂಘದ ವತಿಯಿಂದ ದೇವಾಲಯದ ಸಹಕಾರದಲ್ಲಿ ಪ್ರತೀ ವರ್ಷ ಬಡ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.

ಹಿಂದುಳಿದ ವರ್ಗದ ಕುದ್ರೋಳಿ ದೇಗುಲ ಇಂದು ವಿಶ್ವ ವಿಖ್ಯಾತ
1912ರಲ್ಲಿ ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಹಿಂದುಳಿದ ವರ್ಗದ ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲದ ನವೀಕರಣದ ಮತ್ತು ಅಭಿವೃದ್ಧಿಯ ಹರಿಕಾರರಾಗಿ ಪೂಜಾರಿಯವರು ಮಾಡಿರುವ ಸಾಧನೆ ಪ್ರತಿಯೊಬ್ಬ ಅಸ್ತಿಕ ಇಷ್ಟಪಡಲೇ ಬೇಕು. ಬ್ರಹ್ಮಶ್ರೀ ಗುರುಗಳ ಆಶಯದಂತೆ ಯಾವುದೇ ಜನಪ್ರತಿನಿಧಿಗಳ ಮುಂದೆ ಮಂಡಿಯೂರದೆ ಸಂಕಲ್ಪಿತ ಶಕ್ತಿ, ಬಡ ಜನತೆಯ ಅವಿರತ ಪರಿಶ್ರಮ, ಭಕ್ತಾದಿಗಳ ಬೆವರಹನಿಯ ಪ್ರತೀಕವಾಗಿ ಕುದ್ರೋಳಿ ದೇವಸ್ಥಾನದ ನವೀಕರಣವಾಗಿದೆ. ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದ ‘ಮೈಸೂರು ದಸರಾ’ ಬಿಟ್ಟರೆ ಎರಡನೇ ಸ್ಥಾನದಲ್ಲಿ ದುರ್ಗಾದೇವಿಯ ಆರಾಧನೆಯಾಗುವ “ಮಂಗಳೂರು ದಸರಾ” ದ ರೂವಾರಿಗಳು ಕೂಡಾ ಶ್ರೀ ಪೂಜಾರಿಗಳವರು. ಶ್ರೀ ಶಾರಧಾ ದೇವಿಯ ಪ್ರತಿಷ್ಟೆ, ನವದುರ್ಗೆಯರ ಪ್ರತಿಷ್ಠೆ, ವಿಶೇಷವಾದ ಸಾಂಸ್ಕøತಿಕ ಕಾರ್ಯಕ್ರಮಗಳು, ಕಣ್ಮಣ ಸೂರೆಗೊಳ್ಳುವ ವಿದ್ಯುತ್ ದೀಪಾಲಂಕಾರಗಳು ವೇಷ ಭೂಷಣಗಳು, ನೂರಾರು ಸ್ಥಬ್ಧ ಚಿತ್ರ ಮೆರವಣಿಗೆಗಳು ಜೊತೆಗೆ ಲಕ್ಷಾಂತರ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯ ದಸರಾ ಶೋಭಾ ಯಾತ್ರೆ ಇವೆಲ್ಲದರ ನಿರ್ಮಾತೃ-ಕರ್ತೃಶಕ್ತಿಯಾಗಿ ಪೂಜಾರಿಯವರ ಪರಿಶ್ರಮ, ಸಾಧನೆಯ ತಪಸ್ಸು, ಧನ್ಯತೆಯ ಭಾವವನ್ನು ಪ್ರತಿಯೊಬ್ಬರೂ ಗುರುತಿಸುತ್ತಾರೆ. ಸುಮಾರು 27 ವರ್ಷಗಳ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡ ಪೂಜಾರಿಯವರು ಅಲ್ಲಿನ ವೈಭವದ ದಸರಾವನ್ನು ನನ್ನ ಕ್ಷೇತ್ರದ ಜನತೆಗೂ ನೀಡಬೇಕೆಂಬ ಸಂಕಲ್ಪದಲ್ಲಿ ಮಂಗಳೂರು ದಸರಾ ಆರಂಭವಾಯಿತು. ದೇವರನ್ನು ಆನೆಯ ಅಂಭಾರಿ ಮೇಲೆ ಹೊತ್ತೊಯ್ಯುವ ಮೈಸೂರು ದಸರಾದ ವೈಭವದಂತೆ ಇಲ್ಲಿ ಶ್ರೀ ಶಾರದಾ ಮಾತೆ ಸಹಿತ ನವದುರ್ಗೆಯರು ಶ್ರೀ ಮಹಾ ಗಣಪತಿ ಮತ್ತು ಶ್ರೀ ನಾರಾಯಣ ಗುರುಗಳ ಪೂಜಿತ ಮೂರ್ತಿಗಳ ಸುಮಾರು 10 ಕಿ.ಮೀ. ದೂರದ ಮೆರವಣೆಗೆಯನ್ನು ಸಂಪನ್ನ ಗೊಳಿಸಿದರು. ಇಂದು ಇಡೀ ವಿಶ್ವದಲ್ಲಿಯೇ ಗುರುತಿಸಲ್ಪಟ್ಟ ಮೈಸೂರು ದಸರಾಕ್ಕೆ ಸರಿ ಸಮನಾಗಿ ವಿದ್ಯುತ್ ದೀಪಾಲಂಕೃತವಾಗಿ ಜಗಜಗಿಸುವ ಮಂಗಳೂರು ದಸರಾಕ್ಕೆ ನೆರೆಯ ರಾಜ್ಯಗಳಿಂದಲೂ, ದೇಶ ವಿದೇಶಗಳಿಂದಲೂ ಜನರು ಬಂದು ಕಣ್ಮನ ತುಂಬಿ ಕೊಳ್ಳುತ್ತಾರೆ. ಮಂಗಳೂರು ದಸರಾ ಎಂದರೆ ಥಟ್ಟನೆ ಪೂಜಾರಿಯವರ ಅಪೂರ್ವವಾದ ಮತ್ತು ಅಪರೂಪವಾದ ಸಾಧನಾ ಶಕ್ತಿ ನಮ್ಮ ಕಣ್ತುಂಬಿ ಬರುತ್ತದೆ. ಅವರ ಸಾಧನೆಯನ್ನು ವರ್ಣಿಸಲು ಶಬ್ದಗಳೇ ಇಲ್ಲವಾಗುತ್ತದೆ. ಅವರ ಕೆಲಸ ಕಾರ್ಯಗಳಲ್ಲಿನ ದೈವಿಕ ಪ್ರೇರಣೆಗಳು ಆ ಮೂಲಕ ವಿಶೇಷವಾದ ಯೋಚನೆಗಳು, ವಿಭಿನ್ನತೆ ಮತ್ತು ಪರಿಪೂರ್ಣತೆ ಎಂತಹ ಮೇಧಾವಿಗಳನ್ನು ಕೂಡಾ ಮೂಕರನ್ನಾಗಿಸುತ್ತದೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲ ಸಹಿತವಾಗಿ ಎಣ್ಮೂರು ಕೋಟಿ ಚೆನ್ನಯರ ಆದಿ ಬೈದ್ಯರ್ಕಳ ಗರೋಡಿಯ ಅಭಿವೃದ್ಧಿ, ಜಿಲ್ಲೆಯ ಹಲವಾರು ದೇವಾಲಯಗಳ ನವೀಕರಣ, ಗರೋಡಿ, ದೈವಸ್ಥಾನಗಳ ನವೀಕರಣ ಮತ್ತು ನಿರ್ಮಾಣ ದಾರ್ಮಿಕ ಕೇಂದ್ರಗಳ ಅಭಿವೃದ್ಧಿ ಹೀಗೆ ಅಜೀರ್ಣವಸ್ಥೆಯಲ್ಲಿದ್ದ ಬಹುತೇಕ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರದಲ್ಲಿ ಪೂಜಾರಿಗಳವರು ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿದ್ದಾರೆ.

ನುಡಿದದ್ದೇ ಮಾತು ; ಮಾತಿನಂತೆ ನಡೆ
ಅದು ಕುದ್ರೋಳಿ ದೇಗುಲದ ನವೀಕರಣದ ಸಂದರ್ಭವಾಗಿತ್ತು. ಪೂಜಾರಿಯವರು ದಿಲ್ಲಿಯಿಂದ ಬರುವಾಗ ವಿಮಾನದಲ್ಲಿ ಮ್ಯಾಗಸೀನ್ ಒಂದು ನೋಡಲು ಸಿಕ್ಕಿತು. ಅದರಲ್ಲಿದ್ದ ಮೈಸೂರಿನ ಭವ್ಯವಾದ ಜಗನ್ ಮೋಹನ್ ಪ್ಯಾಲೇಸ್ ಚಿತ್ರ ಅವರ ಮನಸೂರೆಗೊಂಡಿತು. ಕುದ್ರೋಳಿ ಕ್ಷೇತ್ರದಲ್ಲಿರುವ ಕೊರಗಪ್ಪ ಮಂದಿರದ ಮುಖದ್ವಾರ ಶಿಲ್ಪವನ್ನು ಈ ರೀತಿಯಲ್ಲಿಯೇ ಯಾಕೆ ಪುನರ್ ನಿರ್ಮಿಸಬಾರದು ಎನ್ನುವ ಯೋಚನೆ ಬಂದದ್ದೇ ತಡ ತಕ್ಷಣ ಕ್ಷೇತ್ರದ ಇಂಜಿನೀಯರ್‍ಗಳನ್ನು ಕರೆಸಿಕೊಂಡು ವಿಚಾರವನ್ನು ತಿಳಿಸಿ ಮೈಸೂರ್ ಪ್ಯಾಲೇಸ್ ನೋಡಲು ಕಳುಹಿಸಿಯೇ ಬಿಟ್ಟರು. ಈ ರೀತಿಯಲ್ಲಿ ಮಾಡಬೇಕು ಎಂಬುವುದಾಗಿ ಅವರಿಂದ ನುಡಿಯಾದರೆ ಮತ್ತೆ ಬದಲಾವಣೆಯೆಂಬುವುದೇ ಬಾರದು. ಯಾರು ವಿರೋಧಿಸಿದರೂ ಸರಿ,ಸಂಪೂರ್ಣಗೊಂಡಾಗ ಅವರಿಂದಲೇ ಭೇಷ್ ಎನಿಸಿಕೊಂಡ ಕೆಲಸಕಾರ್ಯಗಳು ನೂರಾರು ನಮ್ಮ ಮುಂದೆ ಕಾಣುತ್ತದೆ. ಮುಂಬಯಿಯ ಬಿಲ್ಲವರ ಬಹು ವರ್ಷಗಳ ಕನಸಾದ ಬಿಲ್ಲವ ಭವನಕ್ಕೆ ಮುಂಬಯಿ ವಿಮಾನ ನಿಲ್ದಾಣದ ಬಳಿ ಮಹಾರಾಷ್ಟ್ರ ಸರಕಾರದಿಂದ ನಿವೇಶನ ಒದಗಿಸಿಕೊಟ್ಟ ಕೀರ್ತಿ ಪೂಜಾರಿಯವರಿಗೆ ಸಲ್ಲಲೇ ಬೇಕು. ಮುಂಬಯಿಯಲ್ಲಿ ಬಿಲ್ಲವರ ಸಂಘ ಅಭಿವೃದ್ಧಿಯಾಗುವಲ್ಲಿ, ಬಿಲ್ಲವರ ಸಂಘ ಪ್ರಯೋಜಿಸಿರುವ ಭಾರತ್ ಬ್ಯಾಂಕಿಗೆ ಹದಿನೇಳು ಶಾಖೆ ತೆರೆಯಲು ಪರವಾನಿಗೆ ತೆಗೆದುಕೊಟ್ಟು ಇಂದು ಭಾರತ್ ಬ್ಯಾಂಕ್ ನೂರಾರು ಶಾಖೆಗಳನ್ನು ಹೊಂದಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೆ ಅದರ ಹಿಂದಿನ ಶಕ್ತಿಯಾಗಿ ಪೂಜಾರಿಯವರ ಸಹಾಯ ಹಸ್ತವನ್ನು ಮನಗಾಣಲೇ ಬೇಕು.
ಅವರು ನಡೆದಿರುವುದೇ ಆದರ್ಶ ಬದುಕಿಗೆ ದಾರಿ ; ನುಡಿದಿರುವುದೇ ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ.ಕೋಪವನ್ನು ಸ್ವೀಕರಿಸಿಕೊಂಡವರು ಅವರ ಆಶೀರ್ವಾದವನ್ನು ಪಡೆದು ಸಮಾಜದಲ್ಲಿ ಉನ್ನತಿಯನ್ನು ಪಡೆದರು. ಅವರ ತಾಳ್ಮೆಯನ್ನು ಅಪಹಾಸ್ಯ ಮಾಡಿದವರು ಅವರಲ್ಲಿ ದೈವೀ ಶಕ್ತಿಯನ್ನು ಕಂಡು ಅವರ ವ್ಯಕ್ತಿತ್ವಕ್ಕೆ ತಲೆಬಾಗಿದರು. ಅವರ ಭ್ರಷ್ಟಾಚಾರರಹಿತ ಹಗರಣರಹಿತವಾದ ರಾಜಕೀಯ ಜೀವನವನ್ನು ಮನಗಂಡವರು ಇಡೀ ದೇಶದಲ್ಲಿಯೇ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಬದ್ದೂರ್ ಶಾಸ್ತ್ರಿಯಂತಹ ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಕಾಣ ಬಯಸುವುದಾದರೆ ಆ ನಂತರ ಪೂಜಾರಿ ಮಾತ್ರ ಎನ್ನುತ್ತಾರೆ.

ಸಾಮಾಜಿಕ ಕ್ರಾಂತಿಯ ಹರಿಕಾರ
ಒಬ್ಬ ಹಿಂದುಳಿದ ವರ್ಗದ ಪೂಜಾರಿಯವರು ರಾಜಕೀಯ ಸಾಮಾಜಿಕ ದಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಬೆಳವಣಿಗೆಯಲ್ಲಿ ತನ್ನದೇ ಆದ ಪ್ರತಿಭೆಯನ್ನು ಪ್ರದರ್ಶಿಸಿ ಜನಮನದಲ್ಲಿ ದೇವರನ್ನು ಕಾಣುತ್ತಾ ಮಾಡಿರುವ ಜನ ಮೆಚ್ಚಿದ ಕೆಲಸ ಕಾರ್ಯಗಳು ಕ್ರಾಂತಿಕಾರಿ ಬದಲಾವಣೆಗಳು ಅಪಾರ. ಬಡ ನಿರ್ಗತಿಕರು ಮತ್ತು ಅವರಿಗೆ ಸಹಾಯಹಸ್ತವನ್ನು ನೀಡುವ ದಾನಿಗಳು ಹಾಗೂ ಭಕ್ತಾದಿಗಳೇ ಅವರ ಕುಟುಂಬ. ಮಾನವರಲ್ಲಿ ದೇವರನ್ನು ಕಾಣುವ ಅವರು ತಂತ್ರ ಮಂತ್ರಗಳಿಂತಲೂ ಪ್ರಾಮಾಣಿಕತೆ ಮತ್ತು ಪರಿಶುದ್ಧವಾದ ಭಕ್ತಿಯಿಂದ ದೇವರನ್ನು ಒಲಿಸಿಕೊಲ್ಲಬಹುದು ಎಂದು ನಂಬಿದವರು. ಅಸ್ಪ್ರಶ್ಯತಾ ಕಾಯ್ದೆ, ಭೂ ಮಸೂದೆ ಕಾಯ್ದೆಯ ಪ್ರಯೋಜನವನ್ನು ಜನತೆಗೆ ತಲುಪಿಸುವಲ್ಲಿ, ಸಾಮಾಜಿಕ ಪಿಡುಗುಗಳಿಂದ ಜನರನ್ನು ಸಂರಕ್ಷಿಸುವಲ್ಲಿ ಪೂಜಾರಿಯವರ ಪಾತ್ರ ಮಹತ್ತರವಾದುದು. ಜಾತಿ ಮತ ಮುಖ್ಯವಲ್ಲ. ಶುದ್ಧ ಜೀವನ ಮತ್ತು ದೇವರಲ್ಲಿ ಭಕ್ತಿ ಮುಖ್ಯ ಎಂದು ಹೇಳುತ್ತಿರುವ ಪೂಜಾರಿಗಳವರು ಪುರುಷರಿಗಿರುವಷ್ಟು ಸಮಾನತೆ ಮಹಿಳೆಯರಿಗೆ ಬೇಕು. ಮಹಿಳೆಯರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಸ್ರೀಯರನ್ನು ನಿರಂತರವಾಗಿ ಶೋಷಿಸುವ ಯಾರದೋ ಸ್ವಾರ್ಥಕ್ಕಾಗಿ ಪರಂಪರಾಗತವಾಗಿ ಪಾಲಿಸಿಕೊಂಡು ಬಂದಿರುವ ಮೌಢ್ಯಾಚರಣೆ ಸರಿಯಲ್ಲ ಎಂದು ಕಳೆದ ಹಲವಾರು ವರ್ಷಗಳಿಂದ ಪೂಜಾರಿಯವರು ಹೇಳಿಕೊಳ್ಳುತ್ತಲೇ ಅದರ ಸಂಪೂರ್ಣ ನಿಷೇಧಕ್ಕೆ ಜನಜಾಗೃತಿ ಮಾಡಿದ್ದಾರೆ. ಹಲವು ದಶಕಗಳ ಹಿಂದೆ ಅಮಾನುಷವಾಗಿ ಆಚರಿಸಿಕೊಂಡು ಬರುತ್ತಿದ್ದ “ಸತಿ ಸಹಗಮನ ಪದ್ಧತಿ”ಯಂತೆ ಮುಂದುವರಿಯುತ್ತಿರುವ ಈ ಕಾಲದಲ್ಲಿಯೂ ಪತಿ ಮರಣ ಹೊಂದಿದ ಸ್ರೀಗೆ ವಿಧವೆಯೆಂಬ ಪಟ್ಟ ಕಟ್ಟಿ ಆಕೆಯ ಬದುಕನ್ನೇ ಚಿವುಟಿ ಹಾಕುವ ಅನಿಷ್ಟ ಸಂಪ್ರದಾಯ ಉಳಿದುಕೊಂಡಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿ ಅದಕ್ಕೆ ಇತಿಶ್ರೀ ಹಾಡಲು ಪೂಜಾರಿಯವರು ಹಲವಾರು ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ತನ್ನ ಬಂಧುಗಳು ಒಂದಲ್ಲ ಒಂದು ದಿನ ವಿಧವೆಯರಾದಾಗ ಅವರನ್ನು ಯಾವುದೇ ಶುಭ ಸಮಾರಂಭಗಳಿಂದ ದೂರವಿರಿಸುವುದನ್ನು ಪ್ರತಿಯೊಬ್ಬರೂ ಆಕ್ಷೇಪಿಸಿ ಬಂಧುತ್ವದ ಬಗ್ಗೆ ಯೋಚಿಸಬೇಕಾದ ಅಗತ್ಯತೆಯನ್ನು ತಿಳಿಹೇಳುತ್ತಾರೆ. ಈ ಬಗ್ಗೆ ದಲಿತ ವಿಧವಾ ಮಹಿಳೆಯ ಪಾದ ಪೂಜೆಯನ್ನು ಕುದ್ರೋಳಿ ಕ್ಷೇತ್ರದಲ್ಲಿ ಪೂಜಾರಿಗಳು ತಾನೇ ಮಾಡುತ್ತಾರೆ. ವಿಧವಾ ಸ್ರೀಯರಿಂದ ಹೋಮ ಹವನಗಳಿಗೆ ಪೂರ್ಣಾಹುತಿ ನೀಡಿಸುತ್ತಾರೆ. ಕುಂಕುಮ ಮಲ್ಲಿಗೆ ಹೂಗಳನ್ನು ನೀಡಿ ಸಮಾನ ವಾಹಿನಿಗೆ ತಂದು ಅವರಿಗೆ ಗೌರವವನ್ನು ನೀಡುತ್ತಾರೆ. ವಿಧವ ಸ್ರೀಯರಿಂದ ಕ್ಷೇತ್ರದ ಬೆಳ್ಳಿ ರಥವನ್ನು ಎಳೆಸುತ್ತಾರೆ. ಮಾತ್ರವಲ್ಲದೆ ಕ್ಷೇತ್ರದಲ್ಲಿ ವಿಧವಾ ಅರ್ಚಕಿಯರಿಂದ ದೇವರಿಗೆ ಪೂಜೆ ಮಾಡಿಸುತ್ತಾರೆ. ಈ ಕ್ರಾಂತಿಕಾರಿ ಬದಲಾವಣೆಯನ್ನು ಪಂಡಿತರು ಪಾಮರರು ತೀರಾ ಆಕ್ಷೇಪಿಸಿದಾಗ ಅವರಿಗೆ ಸ್ವಾರ್ಥದ ಸಂಕೋಲೆಯನ್ನು ಕಳಚಿ ಹೊರಬರುವಂತೆ, ಮನುಷ್ಯ ಜನ್ಮದ ಬದುಕುವ ಸ್ವರೂಪದ ಬಗ್ಗೆ ಮರುಪ್ರಶ್ನೆಗಳನ್ನೆಸೆದು ಅನಿಷ್ಠ ಪದ್ಧತಿಯನ್ನು ಬಹಿಷ್ಕರಿಸುವಂತೆ ಪೂಜಾರಿಯವರು ಜನರಿಗೆ ಕರೆ ನೀಡುತ್ತಾರೆ.
ಪೂಜಾರಿಗಳು ಓರ್ವ ನಿಷ್ಠಾವಂತ ರಾಜಕಾರಣಿಯಾಗಿ ಅಪಾರ ಬಂಧು ಬಳಗ ಹಿತೈಷಿಗಳನ್ನು ಹೊಂದಿದ್ದಾರೆ. ಪತ್ನಿ ಮಾಲತಿ ಪೂಜಾರಿ. ಒಂದು ಹೆಣ್ಣು ಮತ್ತು ಮೂವರು ಗಂಡು ಮಕ್ಕಳು. ಒರ್ವ ಮಗ ಮಧುಕುಮಾರ್ ಅಕಾಲಿಕವಾಗಿ ಮರಣವನ್ನಪ್ಪಿದ್ದಾರೆ. ಉನ್ನತ ಪದವಿಗಳನ್ನು ಪಡೆದುಕೊಂಡಿರುವ ಮೊದಲ ಮಗ ಸಂತೋಷ್ ಕುಮಾರ್ ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಎರಡನೇ ಮಗ ದೀಪಕ್ ಕುಮಾರ್ ಕುದುರೆಮುಖ ಪ್ರಾಜೆಕ್ಟ್‍ನಲ್ಲಿ ಇಂಜಿನೀಯರ್ ಆಗಿದ್ದಾರೆ. ಮಾಜಿ ಮಂತ್ರಿಗಳ ಮಕ್ಕಳೆಂಬ ಯಾವುದೇ ಅಹಂನ್ನು ಬೆಳೆಸಿಕೊಳ್ಳದೆ, ಮೂವರಿಗೂ ಪೂಜಾರಿಗಳ ಮಾರ್ಗದರ್ಶನದಲ್ಲಿಯೇ ಮದುವೆಯಾಗಿ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಎಲ್ಲಾ ಜಾತಿ ಧರ್ಮಗಳ ಶ್ರದ್ಧಾ ಕೇಂದ್ರ ಕುದ್ರೋಳಿ ಕ್ಷೇತ್ರ
ಒಂದೇ ಜಾತಿ ಒಂದೇ ಮತ ಎಂಬ ಗುರುಗಳ ಸಂದೇಶದಂತೆ ಕುದ್ರೋಳಿ ಕ್ಷೇತ್ರವನ್ನು ಕೇವಲ ಬಿಲ್ಲವರಿಗಾಗಿ ಮಾತ್ರ ಮೀಸಲಿರಿಸದೆ ಎಲ್ಲಾ ಜನಾಂಗಗಳ ಶ್ರದ್ಧಾ ಕೇಂದ್ರವಾಗಿ ರೂಪಿಸಿದವರು ಪೂಜಾರಿಗಳವರು. ಯಾವುದೇ ಕಾರ್ಯಕ್ರಮಗಳು ನಡೆದಾಗ ಜಾತಿ ಧರ್ಮವನ್ನು ಮೀರಿ ಕಾರ್ಯಕ್ರಮದಲ್ಲಿ ಎಲ್ಲಾ ಜಾ ತಿ ಮತ ಧರ್ಮದವರನ್ನು ಆಮಂತ್ರಿಸುವ ಆ ಮೂಲಕ ಮಾನವ ಧರ್ಮಕ್ಕೆ ಗೌರವವನ್ನು ನೀಡುವ ಪದ್ಧತಿಯನ್ನು ಪೂಜಾರಿಗಳು ರೂಢಿಸಿಕೊಂಡು ಬಂದಿದ್ದಾರೆ. ತಮ್ಮ ಜಾತಿ ಸಂಘಟನೆಯನ್ನು ಬೆಳೆಸಿ ಇಡೀ ಸಮಾಜಕ್ಕೆ ಒಂದು ಆದರ್ಶ ಸಂಘಟನೆಯನ್ನಾಗಿ ಬೆಳೆಸಿ ಆ ಮೂಲಕ ಬಡ ನಿರ್ಗತಿಕರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಪ್ರಯತ್ನ ಮಾಡುತ್ತಿದ್ದಾರೆ. 82ರ ಇಳಿ ವಯಸ್ಸಿನಲ್ಲಿಯೂ ಪೂಜಾರಿಯರಲ್ಲಿರುವ ಸ್ವತಂತ್ರವಾದ ವಿಚಾರಶೀಲ ಶಕ್ತಿಗಳ ಮೂಲಕ ಅದೆಷ್ಟೋ ಯೋಜನೆಗಳು ಕಾರ್ಯರೂಪಕ್ಕೆ ಬರಲು ತವಕಿಸುತ್ತಿದೆ. ಮಹತ್ತರವಾದ ಕ್ರಾಂತಿಕಾರಿ ಯೋಜನೆಗಳ ಅನುಷ್ಠಾನದ ಜೊತೆ ಜೊತೆಗೆ ಸಮಾಜದ ಎಲ್ಲಾ ಹಿಂದುಳಿದ ವರ್ಗದವರನ್ನು ಗುರುತಿಸಿ ಅವರನ್ನು ಬೆಳೆಸುವ ಯೋಜನೆ ಆರಂಭವಾಗಿದೆ. ಸುಮಾರು 3 ಕೋಟಿ ಸಂಗ್ರಹದ ಮೇಲೆ ವಿದ್ಯಾದಾನ ನಿಧಿ, ಅನ್ನದಾನ ನಿಧಿ, ಸಾಮಾಜಿಕ ನಿಧಿ ಮತ್ತು ಸಾಮೂಹಿಕ ವಿವಾಹಗಳಂತಹ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿದ ಯೋಜನೆಗಳ ರೂವಾರಿ ಪೂಜಾರಿಗಳವರ ಆಶಯಗಳು ಫಲಪ್ರದವಾಗಲಿ ಎಂದು ಆಶಿಸುತ್ತಾ ಕುಲದೇವರು ಶ್ರೀ ಗೋಕರ್ಣನಾಥ ಅವರಿಗೆ ಆರೋಗ್ಯವನ್ನು ಕರುಣಿಸಲಿ. ನಿಮ್ಮ ಕ್ರಾಂತಿಕಾರಿ ಪರಿವರ್ತನೆಗಳು, ಸಾಂದರ್ಭಿಕವಾದ ಮಾರ್ಗದರ್ಶನಗಳು ದೇವರ ಅನುಗ್ರಹವಾಗಿ ಮೂಡಿ ಬರಲಿ ಎಂಬುವುದೇ ನಮ್ಮ ಪ್ರಾರ್ಥನೆ.

ಜ್ಯೋತಿಪ್ರಕಾಶ್ ಪುಣಚ,  ಪತ್ರಕರ್ತರು

Copyrights © B. Janardhana Poojary        

Site best viewed at 1024 x 768 resolution in I.E 9 +, Mozilla 30 +, Google Chrome 30 +